ಹುಳಿಯಾರು
ಹುಳಿಯಾರಿನಲ್ಲಿ ಎರಡು ಮತ್ತು ಹುಳಿಯಾರು ಹೋಬಳಿಯ ಬೆಳ್ಳಾರ ಮತ್ತು ಹೊಯ್ಸಲಕಟ್ಟೆ ಗ್ರಾಮಗಳಲ್ಲಿ ಒಂದು ಕೊರೊನಾ ಸೋಂಕು ದೃಢವಾಗಿದೆ. ಹುಳಿಯಾರಿನ ಆಜಾದ್ ನಗರದ ಸರ್ವಿಸ್ ಸ್ಟೇಷನ್ ಪಕ್ಕದ ಬೀದಿಯ 55 ವರ್ಷದ ನಿವಾಸಿಯೊಬ್ಬರಿಗೆ ಹಾಗೂ ಈಗಾಗಲೆ ಒಂದೇ ಕುಟುಂಬದ 11 ಮಂದಿಗೆ ಕೊರೊನಾ ಸೋಂಕು ತಗುಲಿ ಸೀಲ್‍ಡೌನ್ ಆಗಿರುವ ಲಿಂಗಾಯಿತರ ಬೀದಿಯಲ್ಲಿ ಮತ್ತೊಂದು ಸೋಂಕು ದೃಢವಾಗಿದ್ದು, ಇವರೂ ಸಹ ಇದೇ ಕುಟುಂಬಕ್ಕೆ ಸೇರಿದವರಾಗಿದ್ದಾರೆ. ಈ ಇಬ್ಬರನ್ನೂ ಮೇಲನಹಳ್ಳಿಯ ಕೋವಿಡ್ ಕೇಂದ್ರಕ್ಕೆ ಕಳುಹಿಸಿಕೊಡಲಾಗಿದೆ.
ಇನ್ನು ಹೋಬಳಿಯ ಬೆಳ್ಳಾರ ಗ್ರಾಮದಲ್ಲಿ ಒಂದು ಪತ್ತೆಯಾಗಿದ್ದು, ತುಮಕೂರಿನಲ್ಲಿ ನರ್ಸಿಂಗ್ ಮಾಡುತ್ತಿದ್ದ ಯುವತಿಗೆ ಕೊರೊನಾ ಸೋಂಕು ತಗುಲಿದೆ. ಈಕೆಗೆ ತುಮಕೂರಿನಲ್ಲಿರುವಾಗಲೇ ಜ್ವರ ಬಂದಿದ್ದು ಗಂಟಲ ದ್ರವ ಪರೀಕ್ಷೆಗೆ ಕೊಟ್ಟು ಬೆಳ್ಳಾರಕ್ಕೆ ಆಗಮಿಸಿದ್ದರು. ದ್ರವ ಪರೀಕ್ಷೆಯಲ್ಲಿ ಕೊರೊನಾ ಸೋಂಕು ತಗುಲಿರುವುದು ದೃಢವಾದ ಹಿನ್ನೆಲೆಯಲ್ಲಿ ಈಕೆಯನ್ನು ತುಮಕೂರು ಕೋವಿಡ್ ಕೇಂದ್ರಕ್ಕೆ ಕರೆದುಕೊಂಡು ಹೋಗಲಾಯಿತು.
ಹುಳಿಯಾರು ಹೋಬಳಿಯ ಹೊಯ್ಸಲಕಟ್ಟೆ ಗ್ರಾಮದಲ್ಲೂ ಸಹ ಒಂದು ಕೇಸು ಪತ್ತೆಯಾಗಿದ್ದು ಇಲ್ಲಿನ 35 ವರ್ಷದ ಮಹಿಳೆಗೆ ಕೊರೊನಾ ಸೋಂಕು ದೃಢವಾಗಿದೆ. ಬೆಂಗಳೂರಿನಲ್ಲಿದ್ದ ಈಕೆ ಸೋಮವಾರ ರಾತ್ರಿ ಹೊಯ್ಸಲಕಟ್ಟೆಗೆ ಬಂದಿದ್ದರು. ಇವರಿಗೆ ವಿಪರೀತ ಕೆಮ್ಮು ಮತ್ತು ನೆಗಡಿಯಿರುವುದನ್ನು ಗಮನಿಸಿದ ಗ್ರಾಮಸ್ಥರು ಆರೋಗ್ಯ ಇಲಾಖೆಗೆ ಮಾಹಿತಿ ನೀಡಿ ರ್ಯಾಪಿಡ್ ಟೆಸ್ಟ್ ಮಾಡಿಸಿದ್ದರು. ಪರೀಕ್ಷೆಯಲ್ಲಿ ಕೊರೊನಾ ದೃಢವಾದ ಹಿನ್ನೆಲೆಯಲ್ಲಿ ಇವರನ್ನು ಕೋವಿಡ್ ಕೇಂದ್ರಕ್ಕೆ ರವಾನಿಸಲಾಯಿತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
