ಬೈಪಾಸ್ ನಿರ್ಮಾಣ : ಜಮೀನು ಬಿಟ್ಟುಕೊಡುವುದಿಲ್ಲ:ನಿಮ್ಮ ಪರಿಹಾರವು ಬೇಕಾಗಿಲ್ಲ

ಹುಳಿಯಾರು

    ಉದ್ದೇಶಿತ ಬೈಪಾಸ್ ನಿರ್ಮಾಣ ಮಾಡಲು ರೈತರ ಗಮನಕ್ಕೆ ತಾರದೆ ಅವರ ಜಮೀನುಗಳಲ್ಲಿ ಗಡಿಕಲ್ಲು ನೆಟ್ಟಿರುವುದನ್ನು ವಿರೋಧಿಸಿ ತಕರಾರು ತೆಗೆದ ರೈತರ ಪ್ರತಿರೋಧ ತಾಳಲಾರದೆ ಹೆದ್ದಾರಿ ಗುತ್ತಿಗೆದಾರರು ರೈತರ ಜಮೀನನಲ್ಲಿ ನೆಟ್ಟಿದ್ದ ಕಲ್ಲನ್ನು ಕಿತ್ತು ವಾಪಸ್ಸಾದ ಪ್ರಸಂಗ ಹುಳಿಯಾರು ಪಕ್ಕದ ಪೋಚಕಟ್ಟೆ ಗ್ರಾಮದಲ್ಲಿ ನಡೆದಿದೆ.

    ಬೀದರ್ ಶ್ರೀರಂಗಪಟ್ಟಣ ಹೆದ್ದಾರಿ 150 ಎ ಹುಳಿಯಾರು ಮೂಲಕ ಹಾದು ಹೋಗಲಿದ್ದು ಹುಳಿಯಾರಿನಲ್ಲಿ ಬೈಪಾಸ್ ನಿರ್ಮಾಣ ಮಾಡಲು ಯೋಜನೆ ಸಿದ್ಧವಾಗಿದ್ದು ಆ ಪ್ರಕಾರವಾಗಿ ಕೆಂಕೆರೆ ಇಂಡಿಯನ್ ಗ್ಯಾಸ್ ಏಜೆನ್ಸಿ ಬಳಿಯಿಂದ ಆರಂಭವಾಗುವ ಬೈಪಾಸ್ ಲಿಂಗಪ್ಪನಪಾಳ್ಯ, ಕೆಸಿ ಪಾಳ್ಯ ಮತ್ತಿತರ ಗ್ರಾಮಗಳ ಮೂಲಕ ಪೋಚಕಟ್ಟೆ ಬಳಿ ಸೇರಲಿದ್ದು ಒಟ್ಟು ಐದು ಕಿಮೀ ಉದ್ದದ ಬೈಪಾಸ್ ನಿರ್ಮಾಣ ಮಾಡಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರು ಮುಂದಾಗಿದ್ದಾರೆ.

   ಬೈಪಾಸ್ ಹಾದುಹೋಗುವ ಜಮೀನಿನಲ್ಲಿ ಗಡಿಕಲ್ಲು ನೆಡುವ ಕಾರ್ಯಕ್ಕೆ ಗುತ್ತಿಗೆದಾರರು ಖಾಸಗಿ ಎಜೆನ್ಸಿಯವರಿಗೆ ವಹಿಸಿದ್ದು ಆ ಪ್ರಕಾರವಾಗಿ ಗಡಿಕಲ್ಲು ಜಮೀನಿನಲ್ಲಿ ನೆಡುತಿದ್ದ ಸಮಯದಲ್ಲಿ ಜಮೀನಿನವರು ತಕರಾರು ತೆಗೆದು ಯಾವುದೇ ಕಾರಣಕ್ಕೂ ಜಮೀನಿನೊಳಗೆ ರಸ್ತೆ ಹಾದು ಹೋಗಲು ಬಿಡುವುದಿಲ್ಲ, ನಮ್ಮ ಜಮೀನಿನಲ್ಲಿ ಕಲ್ಲು ನೆಡಲು ನೀನು ಯಾರು ಎಂದು ತಕರಾರು ತೆಗೆದರು.

   ಹುಳಿಯಾರು ಭಾಗದಲ್ಲಿ ಉದ್ದೇಶಿತ ಬೈಪಾಸ್ ನಿರ್ಮಾಣ ಮಾಡಲು ರೈತರುಗಳ ತಕರಾರು ಮುಂಚಿನಿಂದಲೂ ಇದ್ದು ಈ ಭಾಗಕ್ಕೆ ಬೈಪಾಸ್ ಅವಶ್ಯಕತೆ ಇಲ್ಲದಿದ್ದರೂ ಸಹ ಯಾರದ್ದೋ ಹಿತಾಸಕ್ತಿಗೆ ಹುಳಿಯಾರಿನಲ್ಲಿ ಬೈಪಾಸ್ ಮಾಡಲು ಮುಂದಾಗಿದ್ದಾರೆ. ಈ ಬಗ್ಗೆ ಸಾರ್ವಜನಿಕರಿಗೆ, ಸಂಬಂಧಪಟ್ಟ ಜಮೀನಿನ ರೈತರಿಗೆ ಮಾಹಿತಿ ನೀಡದೆ ಭೂಸ್ವಾಧೀನ ಪ್ರಕ್ರಿಯೆಗೆ ಮುಂದಾಗಿದ್ದಾರೆ.

   ಯಾವುದೇ ಕಾರಣಕ್ಕೂ ನಮ್ಮ ಪಿತ್ರಾರ್ಜಿತ ಆಸ್ತಿಯನ್ನು ಬಿಟ್ಟುಕೊಡಲು ನಾವು ಸಿದ್ಧರಿಲ್ಲ. ಬೈಪಾಸ್ ನಿರ್ಮಾಣಕ್ಕೆ ನಾವು ಭೂಮಿಯನ್ನು ಕೊಡುವುದಿಲ್ಲ, ನೀವು ಕೊಡುವ ಪುಡಿಗಾಸಿನ ಪರಿಹಾರವೂ ನಮಗೆ ಬೇಡ. ಬೈಪಾಸ್ ನಿರ್ಮಾಣ ಮಾಡುವ ಬದಲು ಪಟ್ಟಣದಲ್ಲಿ ಹಾದು ಹೋಗಿರುವ ರಸ್ತೆಯನ್ನು ಅಗಲೀಕರಣ ಮಾಡಿ ಎಂದು ರೈತರು ಗುತ್ತಿಗೆದಾರರೊಂದಿಗೆ ಜಟಾಪಟಿ ನಡೆಸಿದರು.

    ಬೈಪಾಸ್ ನಿರ್ಮಾಣದ ಬಗ್ಗೆ ರೈತರಿಗೆ ಯಾವುದೇ ಮಾಹಿತಿ ನೀಡದೆ ಅವರ ಜಮೀನಿನ ಸರ್ವೆ ನಂಬರ್ ಸಹಿತ ಅಧಿಸೂಚನೆ ಹೊರಡಿಸಿರುವುದು ಆತಂಕದ ವಿಚಾರ. ಇದರಿಂದಾಗಿ ಅಂಗೈಯಗಲ ಪಿತ್ರಾರ್ಜಿತ ಆಸ್ತಿಯನ್ನು ನಂಬಿಕೊಂಡು ಜೀವನ ನಡೆಸುತ್ತಿರುವ ನೂರಾರು ರೈತ ಕುಟುಂಬಗಳು ಬೀದಿಗೆ ಬೀಳಲಿದೆ ಎಂದರು.

    ಅಧಿಸೂಚನೆಯಲ್ಲಿರುವಂತೆ ನಿಗದಿತ ಸಮಯದಲ್ಲಿ ಲಿಂಗಪ್ಪನ ಪಾಳ್ಯ,ಕೋಡಿಪಾಳ್ಯ, ಹುಳಿಯಾರು ಹಾಗೂ ಕೆ.ಸಿ.ಪಾಳ್ಯದ ಕೆಲವರು ತಕರಾರು ಅರ್ಜಿ ಸಲ್ಲಿಸಿದ್ದಾರೆ. ಈ ಬಗ್ಗೆ ತಕರಾರು ಅರ್ಜಿ ವಿಲೆ ಮಾಡದೇ, ಸಾರ್ವಜನಿಕ ಸಭೆಯನ್ನು ಸಹಾ ಕರೆಯದೆ ವಾಸ್ತವತೆಯನ್ನು ಮರೆ ಮಾಚಲಾಗಿದೆ. ಬೈಪಾಸ್ ಕಾರ್ಯಕ್ಕಾಗಿ ತಮ್ಮ ಸ್ವಂತ ಜಮೀನು ಎಂಬಂತೆ ಕಲ್ಲು ನೆಟ್ಟಿರುವುದು ಸರಿಯಲ್ಲ ಎಂದು ಹರಿಹಾಯ್ದರು.

ಬೈಪಾಸ್ ಅವಶ್ಯಕತೆ ಇಲ್ಲ:

      ಜಮೀನಿನವರ ಪರವಾಗಿ ಮಾತನಾಡಿದ ನಿವೃತ್ತ ಉಪನ್ಯಾಸಕ ಎಸ್.ರಾಮಯ್ಯ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಈಗಾಗಲೇ ಕಿಬ್ಬನಹಳ್ಳಿಕ್ರಾಸ್ ನಿಂದ ಹುಳಿಯಾರಿನವರೆಗೂ ಆರಂಭವಾಗಿದೆ. ವಾಹನ ದಟ್ಟಣೆ ಅಂಕಿಅಂಶಗಳ ಪ್ರಕಾರ ಹುಳಿಯಾರು ಭಾಗಕ್ಕೆ ಬೈಪಾಸ್ ಅವಶ್ಯಕತೆಯಿರುವುದಿಲ್ಲ. ಬದಲಿಗೆ ಹಾಲಿಯಿರುವ ರಸ್ತೆಯನ್ನೆ ಅಗಲೀಕರಣ ಮಾಡಿಕೊಂಡು ಹೆದ್ದಾರಿ ನಿರ್ಮಿಸಲು ಯಾವುದೇ ಸಮಸ್ಯೆ, ತಕರಾರಿಲ್ಲ.

     ಆದರೆ ಕೆಲವು ಹಿತಾಸಕ್ತಿಗಳು, ಶ್ರೀಮಂತರು ಸೇರಿಕೊಂಡು ತಮ್ಮ ವಾಣಿಜ್ಯಮಳಿಗೆ, ಕಟ್ಟಡ, ನಿವೇಶನ ರಕ್ಷಿಸಲು ಬೈಪಾಸ್ ನಿರ್ಮಿಸುವಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಮೇಲೆ ಒತ್ತಡ ತಂದಿರುವ ಪರಿಣಾಮ ಬೈಪಾಸ್ ಯೋಜನೆ ಸಿದ್ಧವಾಗಿದೆಯೇ ಹೊರತು ಅವಶ್ಯಕತೆಗನುಗುಣವಾಗಿ ಅಲ್ಲ ಎಂದರು.

      ಅನಾವಶ್ಯಕವಾಗಿ ಸಮಸ್ಯೆಗಳನ್ನು ಸೃಷ್ಟಿಸುವ ಬದಲು ಅವಶ್ಯವೇಯಿರದ ಬೈಪಾಸ್ ನಿರ್ಮಿಸುವುದನ್ನು ಕೈ ಬಿಟ್ಟರೆ ಒಳಿತು ಎಂದರು. ಬೈಪಾಸ್ ನಿರ್ಮಾಣ ಮಾಡಿದಲ್ಲಿ ರಸ್ತೆ ಕಾಮಗಾರಿ ನಿರ್ವಹಣೆ ವೆಚ್ಚಕ್ಕಿಂತ ಭೂಸ್ವಾಧೀನ ಪಡಿಸಿಕೊಳ್ಳಲಾಗುವ ಜಮೀನಿಗೆ ಖರ್ಚು ಮಾಡುವ ಹಣವೇ ದುಪ್ಪಟ್ಟಾಗುತ್ತದೆ. ಅಲ್ಲದೆ ಭೂಸ್ವಾಧೀನ ಪ್ರಕ್ರಿಯೆಗೆ ಹೆಚ್ಚಿನ ಕಾಲಾವಕಾಶ ಬೇಕಾಗುವುದರಿಂದ ಪಟ್ಟಣದಲ್ಲಿ ಹಾದು ಹೋಗುವ ರಸ್ತೆ ಅಭಿವೃದ್ಧಿ ಮಾಡುವುದೇ ಒಳಿತು.

       ಇದರಿಂದ ಪಟ್ಟಣ ಕೂಡ ಅಭಿವೃದ್ಧಿ ಆಗುವುದಲ್ಲದೆ ತಾಲೂಕಾಗಲು ಹೆಚ್ಚಿನ ಬಲ ಬಂದಂತಾಗುತ್ತದೆ ಎಂದರು.ರೈತರಿಗೆ ಉತ್ತರ ಕೊಡಲು ಅವರ ಬಳಿ ಯಾವುದೇ ದಾಖಲೆ ಇಲ್ಲದ್ದರಿಂದ ಈ ಬಗ್ಗೆ ಸಂಬಂಧಪಟ್ಟವರಿಗೆ ಫೋನ್ ಮೂಲಕ ಮಾತನಾಡಿ ಈಗಾಗಲೇ ಜಮೀನಿನಲ್ಲಿ ನೀಡಲಾಗಿದ್ದ ಕಲ್ಲನ್ನು ವಾಪಸ್ ಕಿತ್ತುಕೊಂಡು ಲಾರಿಯಲ್ಲಿ ತುಂಬಿಕೊಂಡು ಪಲಾಯನ ಮಾಡಿದರು.ಈ ಸಂದರ್ಭದಲ್ಲಿ ಜಮೀನುಗಳ ಮಾಲೀಕರಾದ ಶಿವಕುಮಾರ್, ಹೆಚ್.ವಿ.ಧನಂಜಯಮೂರ್ತಿ, ಬಸವರಾಜು, ಈಶ್ವರಪ್ಪ, ಸಿದ್ದಪ್ಪ ಮೊದಲಾದವರಿದ್ದರು

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link