ರಾಜ್ಯ ಮಟ್ಟದ ತಾಂತ್ರಿಕ ಕಾರ್ಯಕಾರಿ ಸಮಿತಿ ಸಭೆ

ಪಾವಗಡ :

      ರಾಜ್ಯ ಮಟ್ಟದ ಉನ್ನತ ತಾಂತ್ರಿಕ ಕಾರ್ಯಕಾರಿ ಸಮಿತಿಯ ಮೊದಲನೆಯ ಮಹತ್ವದ ಸಭೆ ಬೆಂಗಳೂರಿನ ನೂತನ ಆರೋಗ್ಯ ಸೌಧ ಕಟ್ಟಡದಲ್ಲಿ ರಾಷ್ಟ್ರೀಯ ಆರೋಗ್ಯ ಅಭಿಯಾನದ ಅಭಿಯಾನ ನಿರ್ದೇಶಕರಾದ ಡಾ.ಅರುಂಧತಿ ಚಂದ್ರಶೇಖರ್, ಐ.ಎ.ಎಸ್.ರವರ ಅಧ್ಯಕ್ಷತೆಯಲ್ಲಿ ಹತ್ತು ಜನ ತಜ್ಞರನ್ನು ಕೂಡಿದ ಮಹತ್ವದ ಸಭೆ ನಡೆಯಿತು.

      ಪೂಜ್ಯ ಸ್ವಾಮಿ ಜಪಾನಂದಜೀರವರು ಈ ಮಹತ್ವದ ಸಮಿತಿಗೆ ಆಯ್ಕೆಯಾದರು. ಸಭೆಯಲ್ಲಿ ಕೋವಿಡ್ ಹಿನ್ನೆಲೆಯಲ್ಲಿ ಹಾಗೂ ರಾಷ್ಟ್ರೀಯ ಕ್ಷಯರೋಗ ನಿವಾರಣಾ ಯೋಜನೆಯಡಿಯಲ್ಲಿ, ಹೆಚ್.ಐ.ವಿ./ಏಡ್ಸ್, ಡಯಾಬಿಟೀಸ್ ಹಾಗೂ ಇತರೆ ಅತಿ ಮುಖ್ಯವಾದ ಆರೋಗ್ಯಕ್ಕೆ ಸಂಬಂಧಪಟ್ಟ ವಿಚಾರಗಳ ಮೇಲೆ ಚರ್ಚೆ ನಡೆಯಿತು.

      1992ನೇ ಇಸವಿಯಿಂದಲೂ ಪೂಜ್ಯ ಸ್ವಾಮಿ ಜಪಾನಂದಜೀ ರವರು ಆರೋಗ್ಯ ಯೋಜನೆಗಳನ್ನು ಕೈಗೆತ್ತಿಕೊಂಡು ನಾನಾ ರೀತಿಯಲ್ಲಿ ಯಶಸ್ವಿಯಾಗಿ ನಡೆಸುತ್ತಾ ಬಂದಿರುವುದನ್ನು ಇಲ್ಲಿ ಗಮನಿಸಬಹುದು. ಈ ಕಾರಣದಿಂದಲೇ ಪೂಜ್ಯ ಸ್ವಾಮಿ ಜಪಾನಂದಜೀರವರನ್ನು ರಾಜ್ಯ ಮಟ್ಟದ ಉನ್ನತ ತಾಂತ್ರಿಕ ಕಾರ್ಯಕಾರಿ ಸಮಿತಿಗೆ ಆಯ್ಕೆ ಮಾಡಿಕೊಳ್ಳಲಾಗಿದೆ.

      ಸಮಿತಿಯಲ್ಲಿ ಗ್ರಾಮಾಂತರ ಹಾಗೂ ನಗರ ಪ್ರದೇಶಗಳಲ್ಲಿ ಯಾವ ರೀತಿಯಲ್ಲಿ ಆರೋಗ್ಯ ಯೋಜನೆಗಳನ್ನು ಅದರಲ್ಲಿಯೂ ಮುಖ್ಯವಾಗಿ ಸಮುದಾಯಕ್ಕೆ ಕಂಟಕವಾಗಿರುವ ಕ್ಷಯ ರೋಗ, ಮಧುಮೇಹ, ಹೆಚ್.ಐ.ವಿ/ಏಡ್ಸ್ ಹಾಗೂ ಪೌಷ್ಟಿಕಾಂಶದ ಕೊರತೆಯಿಂದ ಉಂಟಾಗುವ ಆರೋಗ್ಯ ವೈಪರೀತ್ಯಗಳಿಗೆ ಯಾವ ರೀತಿ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಆರೋಗ್ಯ ವಲಯದಲ್ಲಿ ಬದಲಾವಣೆ ತರಬೇಕು ಎಂಬುದನ್ನು ದೀರ್ಘವಾಗಿ ಚರ್ಚಿಸಲಾಯಿತು.

      ಈ ಸಮಿತಿಯು ಪ್ರತಿ ಮೂರು ತಿಂಗಳಿಗೊಮ್ಮೆ ಸಭೆ ನಡೆಸಿ ತನ್ಮೂಲಕ ಎಲ್ಲ ತಜ್ಞರ ಅಭಿಪ್ರಾಯಗಳನ್ನು ಸಂಗ್ರಹಿಸಿ ಅದರ ಅನುಷ್ಠಾನ ರೂಪವನ್ನು ಯಾವ ನಿಟ್ಟಿನಲ್ಲಿ ಆರೋಗ್ಯ ಇಲಾಖೆಯಲ್ಲಿ ಅಳವಡಿಸಿಕೊಳ್ಳಬಹುದು ಎಂಬುದನ್ನು ಚರ್ಚಿಸಲಾಯಿತು. ಈ ಹಿಂದೆ ಪೂಜ್ಯ ಸ್ವಾಮಿ ಜಪಾನಂದಜೀ ರವರು ಕರ್ನಾಟಕ ರಾಜ್ಯದ ಆರೋಗ್ಯ ಕಾರ್ಯಪಡೆಯಲ್ಲಿ ಸದಸ್ಯರಾಗಿ ಕಾರ್ಯಪಡೆಯ ಹದಿನೈದು ಜನ ಸದಸ್ಯರಲ್ಲಿ ಒಬ್ಬರಾಗಿ ಕಾರ್ಯನಿರ್ವಹಿಸಿದ್ದನ್ನು ಸ್ಮರಿಸಬಹುದಾಗಿದೆ. ಸಭೆಯಲ್ಲಿ ರಾಜ್ಯದ ಆರೋಗ್ಯ ಇಲಾಖೆಯ ಉನ್ನತ ಮಟ್ಟದ ಅಧಿಕಾರಿ ವರ್ಗದವರು, ತಜ್ಞರು ಭಾಗವಹಿಸಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link