ಶಿರಾ :
ಶಿರಾ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿನ ರಾಜಕೀಯ ಮುತ್ಸದ್ದಿಗಳಿಗೆ ಇದೀಗ ಬಿಡುವಿಲ್ಲದ ಸಡಗರ. ಕ್ಷೇತ್ರದ ವಿವಿಧ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರುಗಳು ಕಳೆದ ಎರಡು ತಿಂಗಳಿಂದಲೂ ರಾಜಕೀಯ ದಾಳಗಳನ್ನುರುಳಿಸಿ ಉಪ ಚುನಾವಣೆಯಲ್ಲಿ ಮೈಗಂಟಿಕೊಂಡಿದ್ದ ಬೆವರಿನ ವಾಸನೆ ಕರಗುವ ಮುನ್ನವೇ ಇದೀಗ ಮತ್ತೊಂದು ಚುನಾವಣೆಯು ಎದುರಾಗಿ ರಾಜಕಾರಣಿಗಳು ಮತ್ತೊಮ್ಮೆ ಧೂಳು ಕೊಡವಿಕೊಂಡು ಮೇಲೇಳುತ್ತಿದ್ದಾರೆ.
ಶಿರಾ ಕ್ಷೇತ್ರದಲ್ಲಿ ವಿಧಾನಸಭೆಯ ಉಪ ಚುನಾವಣೆ ಎದುರಾಗುತ್ತದೆಂಬ ನಿರೀಕ್ಷೆ ಯಾರಲ್ಲೂ ಇರಲಿಲ್ಲವಾದರೂ ಉಪ ಚುನಾವಣೆ ಎಂದರೆ ಅದೊಂದು ರೀತಿಯ ಚುನಾವಣಾ ರಣರಂಗದ ಯುದ್ಧದಂತೆ ಎಂಬುದರ ಅರಿವು ಈ ಭಾಗದ ಜನ ಸಾಮಾನ್ಯರಿಗೂ ಅರಿವಾಗಿಬಿಟ್ಟಿದೆ.
ಹಣದ ಅಮಿಷ, ಮುಖಂಡರುಗಳ ಪಕ್ಷಾಂತರಗಳ ಪರ್ವ ಸೇರಿದಂತೆ ಪಕ್ಷನಿಷ್ಟೆ, ಪ್ರಾಮಾಣಿಕತೆ, ಸ್ವಾಭಿಮಾನಗಳ ಹರಾಜಕತೆಯೇ ಕಳೆದ ಉಪ ಚುನಾವಣೆಯಲ್ಲಿ ನಡೆದು ಸಜ್ಜನರಿಗೆ ಇಂತಹ ಉಪ ಚುನಾವಣೆ ನಿಜಕ್ಕೂ ಅಸಹ್ಯ ತರಿಸಿದೆಯಲ್ಲದೆ ಚುನಾವಣೆ ಎಂದರೆ ಈ ಹಿಂದೆ ಸ್ಪರ್ಧಿಸಿದ್ದ ಅಭ್ಯರ್ಥಿಗಳು ಕೂಡಾ ಬೆದರು ಬೊಂಬೆಯಂತಾಗುವ ಸನ್ನಿವೇಶವೂ ಕ್ಷೇತ್ರದಲ್ಲಿ ಸೃಷ್ಠಿಯಾಗಿದೆ.
ಶಿರಾ ಕ್ಷೇತ್ರದಲ್ಲಿ ಇತ್ತೀಚೆಗಷ್ಟೆ ಮೃತರಾದ ಶಾಸಕ ಬಿ.ಸತ್ಯನಾರಾಯಣ್ ಅವರ ನಿಧನದ ಹಿನ್ನೆಲೆಯಲ್ಲಿ ನಡೆದ ಉಪ ಚುನಾವಣೆಯ ಸಂದರ್ಬದಲ್ಲಿ ಮತಾದಾರರ ಬೆರಳಿಗೆ ಹಾಕಿದ ಮಸಿ ಇನ್ನೂ ಕೂಡಾ ಮಾಸಿಲ್ಲವಾದರೂ ಈ ಮಸಿ ಸಂಪೂರ್ಣವಾಗಿ ಅಳಿಸಿ ಹೋಗುವ ಮುನ್ನವೇ ಸ್ಥಳೀಯ ಗ್ರಾಮ ಪಂಚಾಯ್ತಿಗಳ ಚುನಾವಣೆಯು ಎದುರಾಗಿದ್ದು ಇದೀಗ ಅಪ್ಪಟ ಗ್ರಾಮೀಣ ಭಾಗದ ರಾಜಕೀಯ ಮುಖಂಡರ ಮುಖದಲ್ಲಿ ರಾಜಕೀಯ ಕಳೆ ಮೂಡತೊಡಗಿದೆ.
ಶಿರಾ ತಾಲ್ಲೂಕಿನಲ್ಲಿ ಒಟ್ಟು 42 ಗ್ರಾಮ ಪಂಚಾಯ್ತಿಗಳಿದ್ದು 357 ಮತಗಟ್ಟೆಗಳಿವೆ. ಒಟ್ಟು 660 ಸ್ಥಾನಗಳಿಗೆ ಗ್ರಾಮ ಪಂಚಾಯ್ತಿಗಳ ಚುನಾವಣೆ ನಡೆಯಬೇಕಿದ್ದು ನ:30 ರಂದು ಚುನಾವಣಾ ಆಯೋಗ ನೀತಿ ಸಂಹಿತೆಯನ್ನು ಜಾರಿಗೊಳಿಸುತ್ತಿದ್ದಂತೆಯೆ ಗ್ರಾಮೀಣ ಮಟ್ಟದ ರಾಜಕೀಯ ಮುಖಂಡರಲ್ಲಿ ಸಂಚಲನವೇ ಉಂಟಾಗಿದೆ.
ರಾಜ್ಯದಲ್ಲಿ ನಡೆಯಲಿರುವ 2 ಹಂತದ ಚುನಾವಣೆಯ ಪೈಕಿ 2ನೇ ಹಂತದ ಚುನಾವಣೆ ಶಿರಾ ತಾಲ್ಲೂಕಿನಲ್ಲಿ ನಡೆಯಲಿದ್ದು 42 ಗ್ರಾಮ ಪಂಚಾಯ್ತಿಗಳಿಗೆ 42 ಮಂದಿ ಚುನಾವಣಾಧಿಕಾರಿಗಳು, 42 ಮಂದಿ ಸಹಾಯಕ ಚುನಾವಣಾಧಿಕಾರಿಗಳನ್ನು ಈಗಾಗಲೇ ನೇಮಕ ಮಾಡಲಾಗಿದೆ.
ಡಿ:11 ರಿಂದ 16ರವರೆಗೆ ಅಭ್ಯರ್ಥಿಗಳಿಂದ ನಾಮಪತ್ರ ಸ್ವೀಕರಿಸುವ ಪ್ರಕ್ರಿಯೆ ನಡೆಯಲಿದ್ದು ಡಿ:17 ರಿಂದ 19ರವರೆಗೆ ನಾಮಪತ್ರಗಳನ್ನು ಹಿಂಪಡೆಯಲು ಅವಕಾಶ ಕಲ್ಪಿಸಲಾಗಿದೆ. ಡಿ:27 ರಂದು ಚುನಾವಣೆ ನಡೆಯಲಿದ್ದು ತಾಲ್ಲೂಕು ಆಡಳಿತ ಚುನಾವಣೆ ಯಶಸ್ವಿಗೊಳಿಸಲು ಕಟ್ಟುನಿಟ್ಟಿನ ಕ್ರಮವನ್ನು ಕೂಡಾ ಕೈಗೊಂಡಿದೆ.
ಶಿರಾ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮ ಪಂಚಾಯ್ತಿಗಳಲ್ಲಿ ನಡೆಯುವ ಯಾವುದೇ ಚುನಾವಣೆಗಳಲ್ಲಿ ಈ ಭಾಗದ ಮತದಾರ ಮುಂಜಾಗ್ರತಾ ದೃಷ್ಠಿಯಿಂದಲೇ ಮತದಾರರನ್ನು ಈವರೆಗೆ ಆಯ್ಕೆ ಮಾಡಿಕೊಳ್ಳುತ್ತಾ ಬಂದಿದ್ದು ವಿವಿಧ ರಾಜಕೀಯ ಪಕ್ಷಗಳ ಪ್ರಭಾವವೂ ಸ್ಥಳೀಯ ಪಂಚಾಯ್ತಿಗಳ ಚುನಾವಣೆಯಲ್ಲಿ ಗಮನಾರ್ಹ ಪ್ರಭಾವವನ್ನು ಬೀರುತ್ತಲೇ ಬಂದಿವೆ.
ಕಳೆದ ಕೇವಲ 1 ತಿಂಗಳ ಹಿಂದಷ್ಟೆ ಉಪ ಚುನಾವಣೆ ನಡೆದ ಪರಿಣಾಮ ಸ್ಥಳೀಯ ಚುನಾವಣೆಯಲ್ಲಿ ಅಷ್ಟೊಂದು ಬಿಸಿ ಏರುವುದಿಲ್ಲ ಅಂದುಕೊಂಡಿದ್ದವರಿಗೆ ಗ್ರಾ.ಪಂ. ಚುನಾವಣೆಯೂ ತಲೆ ಕೆಡಿಸಿಬಿಟ್ಟಿದೆ. ತಾಲ್ಲೂಕಿನಲ್ಲಿ ಗ್ರಾಮ ಪಂಚಾಯ್ತಿಯ ಚುನಾವಣೆಯ ಕಾವು ಏರುತ್ತಿದ್ದು ವಿವಿಧ ಪಕ್ಷಗಳ ಮುಖಂಡರು, ಕಾರ್ಯಕರ್ತರಲ್ಲಿ ಹುಮ್ಮಸ್ಸು ಮೂಡಿದೆ.
ಈ ಹಿಂದೆ ನಡೆದ ಗ್ರಾ.ಪಂ. ಚುನಾವಣೆಗಳಲ್ಲಿ ತಾಲ್ಲೂಕಿನಾಧ್ಯಂತ ಕಾಂಗ್ರೆಸ್ ಹಾಗೂ ಜೆ.ಡಿ.ಎಸ್. ಪಕ್ಷದಲ್ಲಿ ಗುರ್ತಿಸಿಕೊಂಡಿದ್ದ ಬಹುತೇಕ ಕಾರ್ಯಕರ್ತರು ಪಕ್ಷದ ಚಿನ್ಹೆ ಇಲ್ಲದಿದ್ದರೂ ಪಕ್ಷದ ಬೆಂಬಲಿಗರಂತೆ ಗುರ್ತಿಸಿಕೊಂಡು ಚುನಾವಣೆಗಳನ್ನು ನಡೆಸಿದ ನಿದರ್ಶನಗಳೇ ಹೆಚ್ಚು.
ಈಗ ನಡೆಯಲಿರುವ ಚುನಾವಣೆಯೂ ಕೂಡಾ ಆಯಾ ಪಕ್ಷದ ರಾಜಕೀಯ ದುರೀಣರ ಬೆಂಬಲಗಳ ಮೂಲಕವೇ ನಡೆಯುವ ನಿರೀಕ್ಷೆ ಇದ್ದು ನಿನ್ನೆಯಷ್ಟೆ ಮಾಜಿ ಸಚಿವ ಟಿ.ಬಿ.ಜಯಚಂದ್ರ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಸಭೆ ಕರೆದು ಗ್ರಾ.ಪಂ. ಚುನಾವಣೆಗಳ ತಯಾರಿ ಬಗ್ಗೆ ಪೂರ್ವಭಾವಿ ಸಭೆ ನಡೆಸಿದ್ದಾರೆ.
ಇತ್ತ ಜೆ.ಡಿ.ಎಸ್. ಪಕ್ಷದಿಂದ ಯಾವುದೇ ಪೂರ್ವಭಾವಿ ಸಭೆ ಕರೆಯದಿದ್ದರೂ ಪಕ್ಷದ ಕಾರ್ಯಕರ್ತರು ಮಾತ್ರಾ ಚುನಾವಣೆಗಯನ್ನು ಎದುರಿಸಲು ತಯಾರಾಗುತ್ತಿದ್ದಾರೆ. ಇನ್ನೂ ಈ ಹಿಂದಿನ ಗ್ರಾ.ಪಂ. ಚುನಾವಣೆಗಳಲ್ಲಿ ಬಿ.ಜೆ.ಪಿ. ಪಕ್ಷದ ಬೆಂಬಲಿತ ಅಭ್ಯರ್ಥಿಗಳ ಕೊರತೆ ಇದ್ದಿತಾದರೂ ಈ ಭಾರಿ ಗ್ರಾ.ಪಂ. ವ್ಯಾಪ್ತಿಯಲ್ಲೂ ಬಿ.ಜೆ.ಪಿ. ಕಾರ್ಯಕರ್ತರು ರಣಕಣದಲ್ಲಿದ್ದು ಸವಾಲು ನೀಡಲು ಸಜ್ಜಾಗುತ್ತಿದ್ದಾರೆ.
ಗ್ರಾಮ ಪಂಚಾಯ್ತಿ ಚುನಾವಣೆಯಲ್ಲಿ ತಮ್ಮ ಬೆಂಬಲಿತ ಅಭ್ಯರ್ಥಿಗಳನ್ನು ಆರಿಸಿಕೊಂಡರೆ ಮುಂದಿನ ವಿಧಾನಸಭೆ, ಸ್ಥಳೀಯ ತಾ.ಪಂ. ಹಾಗೂ ಜಿ.ಪಂ. ಚುನಾವಣೆಗಳಲ್ಲಿ ಸೆಣಸಾಡಲು ಸಾದ್ಯವೆಂಬುದನ್ನು ಅರಿತ ರಾಜಕೀಯ ಮುಖಂಡರು ಗ್ರಾ.ಪಂ. ಆಡಳಿತವನ್ನು ತೆಕ್ಕೆಗೆ ತೆಗೆದುಕೊಳ್ಳಲು ನಾಮಪತ್ರ ಸಲ್ಲಿಕೆಗೂ ಮುನ್ನವೇ ತಂತ್ರಗಾರಿಕೆ ನಡೆಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
