ತಿಪಟೂರು :
ಪ್ರಕೃತಿ ನಮ್ಮ ಆಸೆಗಳನ್ನು ಪೂರೈಸುತ್ತದೆಯೇ ಹೊರತು ಅತಿ ಆಸೆಯನ್ನಲ್ಲ ಎಂದು ಭಾವಿಸಿ ಇರುವ ನೀರನ್ನು ಹಂಚಿಕೊಂಡು ನಾವು ಬೆಳೆದು, ಇತರರನ್ನು ಬೆಳಸಬೇಕೆಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಕರೆ ನೀಡಿದರು.
ತಾಲ್ಲೂಕಿನ ಶಿವರ ಗ್ರಾಮದಲ್ಲಿ ಹೇಮಾವತಿ ನಾಲೆಯಿಂದ ಶಿವರ, ಕರಿಕೆರೆ, ಗುರುಗದಹಳ್ಳಿ ಹಾಗೂ ಮಾದಿಹಳ್ಳಿ ಕೆರೆಗಳಿಗೆ 36.5 ಕೋಟಿ ವೆಚ್ಚದಲ್ಲಿ ನೀರು ತುಂಬುವ ಕಾರ್ಯಕ್ರಮಕ್ಕೆ ಭೂಮಿಪೂಜೆ ಸಲ್ಲಿಸಿ ಅವರು ಮಾತನಾಡಿದರು.
ಮಾಜಿ ಶಾಸಕರು ತಮ್ಮ ನಿರ್ಧಾರ ಪ್ರಶ್ನಿಸಿಕೊಳ್ಳಲಿ :
ಮೊದಲ ಬಾರಿ ಶಾಸಕನಾಗಿ ಆಯ್ಕೆಯಾದ ಸಂದರ್ಭದಲ್ಲಿ ಅನುಭವದ ಕೊರತೆಯಿಂದ ಕೆಲವು ತಪ್ಪುಗಳಾಗಿದ್ದವು. ಆದರೆ ಈ ಬಾರಿ ಹಾಗೆ ಆಗದಂತೆ ಸೂಕ್ತ ರೀತಿಯಲ್ಲಿ ನೀರಿನ ಅಲೋಕೇಶನ್ ಮಾಡಿಸಿ ಕೆರೆಗಳಿಗೆ ನೀರು ನೀಡುವ ಕಾರ್ಯಕ್ರಮಗಳನ್ನು ಮಾಡುತ್ತಿದ್ದೇನೆ. ಕಳೆದ ಚುನಾವಣೆಯಲ್ಲಿ ಸೋತ ಸಂದರ್ಭದಲ್ಲಿ ಮಾಜಿ ಶಾಸಕರು ನೀರಿನ ಅಲೋಕೇಶನ್ ಮಾಡಿಸದೇ ಹಾಲ್ಕುರಿಕೆ ಕೆರೆಯ ನೀರನ್ನು ತಿರುಗುಗಿಸಿ 4-5 ಕೆರೆಗಳಿಗೆ ನೀರು ಬಿಡಲು ಹೋದರು, ಇದೂ ಸೂಕ್ತವೇ ಎಂಬುದನ್ನು ಅವರೇ ಪ್ರಶ್ನಿಸಿಕೊಳ್ಳಬೇಕು ಎಂದು ಹೇಳಿದರು.
ನೀರಿನ ಸೆಲೆಯೊಂದು ಸಿಕ್ಕಂತಾಗಿದೆ :
ಕೆರೆಗೋಡಿ ರಂಗಾಪುರ ಮಠದ ಶ್ರೀ ಗುರುಪರ ದೇಶಿಕೇಂದ್ರ ಸ್ವಾಮಿಗಳು ಆಶೀರ್ವಚನ ನೀಡುತ್ತಾ, ಸುಮಾರು 20-30 ದಶಕಗಳ ಹೋರಾಟದ ಫಲವಾಗಿ ಇಂದು ಶಿವರ ಕೆರೆಗೆ ನೀರು ಬಂದಿದ್ದು, ಇಲ್ಲಿನ ರೈತಾಪಿ ವರ್ಗದವರಿಗೆ ಕುಡಿಯುವ ನೀರಿನ ಬರವಿತ್ತು. ಈಗ ನಮಗೆ ನೀರಿನ ಸೆಲೆಯೊಂದು ದೊರೆತಂತಾಗಿದ್ದು, ಇಂದು ಕೆರೆಗೆ ನೀರು ಬಿಡುವ ಕಾರ್ಯಕ್ರಮಕ್ಕೆ ಚಾಲನೆ ಸಿಗುವಂತೆ ಮಾಡಿರುವ ಸಚಿವರಿಗೆ ಅಭಿನಂದನೆ ಸಲ್ಲಿಸುವುದು ನಿಜ ಧರ್ಮ. ಇಂತಹ ಹಲವಾರು ಕಾರ್ಯಕ್ರಮಗಳನ್ನು ಮಾಡಿ ರೈತರ ಬದುಕು ಹಸನಾಗುವಂತೆ ಮಾಡಲಿ ಎಂದು ಆಶಿಸಿದರು.
ಕಾರ್ಯಕ್ರಮದಲ್ಲಿ ಎಪಿಎಂಸಿ ಅಧ್ಯಕ್ಷ ಹೆಚ್.ಬಿ.ದಿವಾಕರ್, ಬಿಜೆಪಿ ತಾಲ್ಲೂಕು ಅಧ್ಯಕ್ಷ ಬಳ್ಳೇಕಟ್ಟೆ ಸುರೇಶ್, ಬಿಜೆಪಿ ಮುಖಂಡ ಬಿಸಲೇಹಳ್ಳಿ ಜಗದೀಶ್, ಕೃಷಿಕ ಸಮಾಜದ ಅಧ್ಯಕ್ಷ ಕೆರೆಗೋಡಿ ದೇವರಾಜ್, ಹರಿಸಮುದ್ರ ಗಂಗಾಧರ್ ಮತ್ತಿತರರು ಉಪಸ್ಥಿತರಿದ್ದರು.
ತಿಪಟೂರು ಹಾಗೂ ಚಿಕ್ಕನಾಯಕನಹಳ್ಳಿ ತಾಲ್ಲೂಕುಗಳಿಗೆ ಹೆಚ್ಚಿನ ಅನುದಾನ ತಂದು ಕ್ಷೇತ್ರಗಳಿಗೆ ನೀರುಣಿಸುತ್ತಿರುವ ಸಚಿವರಾದ ಮಾಧುಸ್ವಾಮಿ ಮತ್ತು ಬಿ.ಸಿ.ನಾಗೇಶ್ ಅವರುಗಳ ಜೋಡೆತ್ತುಗಳ ಸೇವೆ ಜನತೆಗೆ ಹೀಗೆ ಇರಲಿ.
– ಗುರುಪರ ದೇಶಿಕೇಂದ್ರಶ್ರೀಗಳು, ಕೆರೆಗೋಡಿ ರಂಗಾಪುರ ಮಠ
ಕೆರೆ ಕೋಡಿಬೀಳಿಸುತ್ತೇವೆಂದು ಹೇಳಿಲ್ಲ :
ನೀರಿನ ಅಲೋಕೇಷನ್‍ಗಾಗಿ ಪ್ರಯತ್ನಿಸಿದ್ದರೆ ಸುಲಭವು ಆಗುತ್ತಿತ್ತು. ನಾವು ಎಲ್ಲೂ ಸಹ ಕೆರೆಗಳನ್ನು ತುಂಬಿಸುತ್ತೇವೆ, ಕೋಡಿ ಬೀಳಿಸುತ್ತೇವೆಂದು ಹೇಳಿಲ್ಲ, ಕೆರೆಯ ಸ್ವಾಭಾವಿಕ ಸಂಗ್ರಹ ಸಾಮಥ್ರ್ಯದಲ್ಲಿ ಶೇ.60 ರಷ್ಟು ಮಾತ್ರ ನೀರು ಹರಿಸಲಾಗುತ್ತದೆ. ಆದರೆ ಕೆಲವರು ನಾವು 50 ಹೆಚ್‍ಪಿ ಮೋಟರ್ ಬಳಸಿ ನೀರನ್ನು ಬಿಟ್ಟರೆ ಅವರು 100 ಹೆಚ್‍ಪಿ ಮೋಟರ್‍ನಿಂದ ನೀರನ್ನು ಬಿಟ್ಟರೆ ಗುಂಡಿಗಳು ತುಂಬುವುದಿಲ್ಲ. ಕೊನೆಗೆ ನೀರನ್ನು ಬಿಡಲಿಲ್ಲವೆಂದು ನಮ್ಮನ್ನು ಆರೋಪಿಸುತ್ತಾರೆ ಎಂದು ಬಿ.ಸಿ.ನಾಗೇಶ್ ನುಡಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
