ಪಾವಗಡ
ಮುಂಬರುವ ಚುನಾವಣೆಯಲ್ಲಿ ಮತದಾರರನ್ನು ಉಳಿಸಿಕೊಳ್ಳಲು ಮೋದಿ ಸರ್ಕಾರ 2019 ರ ಮಧ್ಯಂತರ ಬಜೆಟ್ ಮಂಡಿಸಿದ್ದು, ಇದು ಈ ದೇಶದ ಜನತೆಗೆ ಮಾಡಿದ ದ್ರೊಹ. ಈ ಬಜೆಟ್ ಚುನಾವಣೆಯ ಮುಂಚಿನ ಕಸರತ್ತು ಎಂದು ಸಿ.ಐ.ಟಿಯು.ನ ಜಿಲ್ಲಾ ಮುಖಂಡ ಎನ್.ಕೆ.ಸುಬ್ರಹ್ಮಣ್ಯ ಟೀಕಿಸಿದರು.
ಅಕ್ಷರ ದಾಸೋಹ ನೌಕರರಿಗೆ ಬಜೆಟ್‍ನಲ್ಲಿ ಗೌರವ ಧನ ಹೆಚ್ಚಳ ಮಾಡದೇ ಇರುವುದನ್ನು ಖಂಡಿಸಿ, ಶನಿವಾರ ಪಾವಗಡ ಪಟ್ಟಣದ ಶನಿಮಹಾತ್ಮ ಸರ್ಕಲ್ ಬಳಿ ಅಕ್ಷರ ದಾಸೋಹ ನೌಕರರ ಸಂಘದಿಂದ ಹಮ್ಮಿಕೊಂಡಿದ್ದ ರ್ಯಾಲಿಯಲ್ಲಿ ಅವರು ಮಾತನಾಡಿದರು. ರಾಷ್ಟ್ರದ ವಿವಿಧ ಸಮುದಾಯಗಳನ್ನು ದಾರಿ ತಪ್ಪಿಸುವ ಪ್ರಯತ್ನದಲ್ಲಿ ಕೇಂದ್ರ ಸರ್ಕಾರ ಯಶಸ್ವಿಯಾಗಿದೆ. ದೇಶಕ್ಕೆ ಅನ್ನ ನೀಡುವ ರೈತನಿಗಾಗಿ ಕೇಂದ್ರ ಸರ್ಕಾರ ಐದು ವರ್ಷಗಳ ಅವಧಿಯಲ್ಲಿ ಯಾವುದೇ ರೈತಪರ ಕಾರ್ಯಕ್ರಮಗಳನ್ನು ಜಾರಿಗೆ ತರದ ಕಾರಣದಿಂದಲೆ ಸಾಲು ಸಾಲು ರೈತರ ಆತ್ಮಹತ್ಯೆಗಳು ನಡೆಯುತ್ತಿವೆ ಎಂದು ಕೇಂದ್ರ ಸರ್ಕಾರದ ವಿರುದ್ದ ಆಕ್ರೋಶ ವ್ಯ್ಯಕ್ತಪಡಿಸಿದರು.
ಅಸಂಘಟಿತ ವಲಯದ ಪಿಂಚಣಿ ಮತ್ತು ರೈತರಿಗೆ ನೇರವಾಗಿ 6 ಸಾವಿರ ಧನ ಸಹಾಯ ನೀಡಿರುವುದನ್ನು ಟೀಕಿಸಿದರು. ಜಿಲ್ಲಾ ಅಕ್ಷರ ದಾಸೋಹ ನೌಕರರ ಸಂಘದ ಮುಖಂಡೆ ಕೆಂಚಮ್ಮ ಮಾತನಾಡಿ, 2001 ರಿಂದಲೂ ದೇಶದಾದ್ಯಂತ ಅಕ್ಷರ ದಾಸೋಹ ನೌಕರರು ಅತಿ ಕಡಿಮೆ ಸಂಬಳಕ್ಕೆ ದುಡಿಯುತ್ತಿದ್ದಾರೆ. ಹೀಗಿನ ಬಜೆಟ್‍ನಲ್ಲಿ ನೌಕರರ ಸಂಬಳ ಹೆಚ್ಚು ಮಾಡುವಲ್ಲಿ ಅನುದಾನ ಘೋಷಣೆ ಮಾಡದೆ ಇರುವುದು ದುರದೃಷ್ಟಕರ ಎಂದು ಆಕ್ರೋಶ ವ್ಯಕ್ತ ಪಡಿಸಿ, ಈಗಲಾದರೂ ನರೇಂದ್ರ ಮೋದಿಯವರು ಎಚ್ಚೆತ್ತು ನೌಕರರ ಸಂಬಳವನ್ನು ಹೆಚ್ಚು ಮಾಡಬೇಕು ಎಂದು ಆಗ್ರಹಿಸಿದರು.
ತಾಲ್ಲೂಕು ಸಂಘದ ಅಧ್ಯಕ್ಷೆ ಲಕ್ಷ್ಮೀದೇವಿ, ಸುವರ್ಣಮ್ಮ, ಉಮಾದೇವಿ, ಇಂದಿರಮ್ಮ, ಶಮಂತಕ ಮಣಿ, ಕವಿತಾ, ಮಹಾದೇವಿ, ತಿಮ್ಮನಹಳ್ಳಿ ಸುಬ್ಬರಾಯಪ್ಪ, ಹಮಾಲಿ ಸಂಘದ ರಾಮಾಂಜಿನಪ್ಪ ಮತ್ತಿತರರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
